(Please click here for the English Version)
ಇದು ನಮ್ಮ ಕರ್ನಾಟಕ ರಸ್ತೆ ಸಾರಿಗೆ ಸ೦ಸ್ಥೆಯ ಜನಸಾಮಾನ್ಯ ಗ್ರಾಹಕರಿಗೆ ಕೊಟ್ಟಿರುವ ಉಡುಗೆ. ತಾ: ೧-೧-೧೧ ರಂದು ಮಾರ್ಗ ಸ೦ಖ್ಯೆ ೨೫೫ನ್ನು ಹತ್ತಿ ಮೈಸೂರಿನ ಸಮೀಪದಲ್ಲಿರುವ ಬರದನಪುರ ಹಳ್ಳಿಗೆ ಹೋದಾಗ ಅನುಭವಿಸಿದ ದಾರುಣ ಕಥೆ.
ಬೆ: ೯ ಘಂಟೆಗೆ ವಾಹನ ಸ೦ಖ್ಯೆ ಕೆಏ-೦೧-ಎಫ್-೭೭೮೮ನ್ನು ಹತ್ತಿದಾಗ ವಾಕರಿಕೆ ಬರಿಸುವಂಥ ವಾಸನೆ ನನ್ನ ಮೂಗಿಗೆ ಬಡಿಯಿತು,ಸೂಕ್ಷ್ಮವಾಗಿ ಗಮನಿಸಿದಾಗ ಹಿ೦ದಿನ ಆಸನಗಳ ಹತ್ತಿರ ಮಣ್ಣು ಹರಡಿರುವುದು ಕಾಣಿಸಿತು. ಅದರ ಅರ್ಥ ಮತ್ತು ಅದರಿ೦ದ ಆಗುವ ಅನರ್ಥಗಳನ್ನು ನೀವೇ ಊಹಿಸಿಕೊಳ್ಳಿ. ತಕ್ಷಣ ಇಳಿದು ಅದರ ಹಿ೦ದಿದ್ದ ಮತ್ತೊಂದು ವಾಹನವನ್ನು ಹತ್ತಿ ನೋಡಿದಾಗ ಆ ವಾಹನವೂ ಹೆಚ್ಹು ಕಡಿಮೆ ಅಷ್ಟೇ ಕೊಳಕಾಗಿದ್ದುದು ಕಂಡು ಬಂತು ಮತ್ತು ಅದು ಯಾವಾಗ ಹೊರಡುವುದು ಎನ್ನುವ ಮಾಹಿತಿ ಕೊಡುವವರು ಯಾರೂ ಇರಲಿಲ್ಲ. ಆ ಮಾರ್ಗದಲ್ಲಿ ವೋಲ್ವೋ ಅಥವಾ ಮ್ಯಕ್ರೋಪೋಲೋ ಎಂದಿಗೂ ಓಡಾಡುವುದಿಲ್ಲ ಎ೦ಬುದು ಬೇರೆ ಪ್ರಯಾಣಿಕರಿಂದ ತಿಳಿದು ಬ೦ತು. ಹೀಗಾಗಿ ಮತ್ತೆ ೭೭೮೮ ನ್ನೇ ಹತ್ತಬೇಕಾದ ಅನಿವಾರ್ಯವಾಯಿತು. 'ಹಿರಿಯ ನಾಗರೀಕರಿಗೆ' ಮೀಸಲು ಆಸನವನ್ನು ನೋಡಿದಾಗ ಅಲ್ಲಿ ಓರ್ವ ರೈತ ಬಾಂಧವ ಮೂಟೆಯೊಂದಿಗೆ ಕೂತಿರುವುದು ಕಾಣಿಸಿತು. ಖಾಲಿ ಇದ್ದ ಆಸನದಲ್ಲಿ ಮೂಗಿಗೆ ಕೈವಸ್ತ್ರವನ್ನು ಹಿಡಿದು ಕೂತು ಕಣ್ಣು ಹಾಯಿಸಿದಾಗ ಕಂಡ ದೃಶ್ಯಗಳು. ಕಿಟಕಿಗಳ ಗಾಜುಗಳು ಒಡೆದಿದ್ದವು, ಗಾಳಿ, ಧೂಳನ್ನು ತಡೆಯಲು ರಟ್ಟುಗಳನ್ನು ಸಿಕ್ಕಿಸಲಾಗಿತ್ತು, ಗಾಜುಗಳು ಧೂಳು ಮತ್ತು ಯಾರೋ ಮಾಡಿದ ವಾಂತಿಯ ತುಣುಕುಗಳು ಒಣಗಿ ಅಂಟಿಕೊಂಡಿದ್ದುದು ಕಾಣುತ್ತಿತ್ತು, ಕಬ್ಬಿಣದ ಸಲಾಕೆಗಳು ಮುರಿದಿದ್ದವು ಮತ್ತು ಅವುಗಳು ಮಾಡುವ ಸದ್ದನ್ನು ತಡೆಯಲು ದಾರ ಕಟ್ಟಲಾಗಿತ್ತು, ಆಸನಗಳು ಹರಿದಿದ್ದವು, ವಾಹನದ ತುಂಬ ಧೂಳು ತಾ೦ಡವವಾಡುತ್ತಿತ್ತು, ನಿರ್ವಾಹಕ ಇರಲಿಲ್ಲ, ವಾಹನ ಚಾಲಕರದ್ದೆ ದರ್ಬಾರು, ಹಿ೦ದಿನ ಬಾಗಿಲು ಮುಚ್ಚಲಾಗುತ್ತಿರಲಿಲ್ಲ, ಪ್ರತಿ ನಿಲ್ದಾಣದಲ್ಲಿ ಪ್ರಯಾಣಿಕರನ್ನೇ ಬಾಗಿಲ ಮುಚ್ಚಲು ಚಾಲಕರೇ ಆಜ್ಞೆ ಮಾಡುತ್ತಿದ್ದರು. ಇಷ್ಟೆಲ್ಲಾ ಅನಾನುಕೂಲತೆಗಳನ್ನು ಹೇಗೆ ಅನುಭವಿಸುತ್ತಿದ್ದೀರ ಎಂದು ಸಹ-ಪ್ರಯಾಣಿಕರನ್ನು ವಿಚಾರಿಸಿದಾಗ ಅವರುಗಳು ಬಿಟ್ಟ ನಿಟ್ಟುಸಿರೇ ಅವರ ಅಸಹಾಯಕತೆಯ ಪರಮಾವಧಿಯನ್ನು ತೋರಿದಂತಿತ್ತು - "ಬೇರೆ ಗತಿಯಿಲ್ಲ ಸ್ವಾಮಿ, ನಮ್ಮ ಕಣ್ಣೀರನ್ನು ಒರೆಸುವವರು ಯಾರಿದ್ದಾರೆ?" ಎಂಬ ಮಾತುಗಳನ್ನು ಕೇಳಿ ನನ್ನ ಕಣ್ಣೂ ತೇವವಾಯಿತು.
ಸಾಮಾಜಿಕ ಅಸಮತೋಲನ ಮತ್ತು ಅಸಮಂಜಸತೆಗಳನ್ನು ನೀಗಿಸುವ ನಿಟ್ಟಿನಲ್ಲಿ ವೈಫಲ್ಯವಾಗಿ ಸುವ್ಯವಸ್ಥೆಯನ್ನು ಸಮಾಜದಲ್ಲಿ ತರುವ ಬದಲು ಅವ್ಯವಸ್ಥೆಯ ಆಗರವನ್ನಾಗಿ ಮಾಡಿರುವ ನಮ್ಮ ರಾಜಕೀಯ ಮತ್ತು ಅಧಿಕಾರ ವರ್ಗಗಳ ಬಗ್ಗೆ ಮತ್ತು ನಮ್ಮ ವ್ಯವಸ್ಥೆಯ ಬಗ್ಗೆ ಹೇಸಿಗೆಯಾಯಿತು.
ಏಕೆ ಹೀಗೆ - ಒಂದು ಕಣ್ಣಿಗೆ ಬೆಣ್ಣೆ (ವೋಲ್ವೋ, ಮಕ್ರೊಪೋಲೋಗಳು - ನಗರ ನಾಗರೀಕರಿಗೆ ರಿಯಾಯಿತಿ ದರದಲ್ಲಿ ಮತ್ತು ಅವುಗಳನ್ನು ಓಡಿಸುವುದರಿಂದ ಭರಿಸಲಾಗದ ನಷ್ಟ ಆಗುತ್ತಿದ್ದರೂ ಸಹ) ಇನ್ನೊಂದು ಕಣ್ಣಿಗೆ ಸುಣ್ಣ (ಕಿತ್ತು ಹೋದ ವಾಹನಗಳು - ಮಾಸಲು ಬಟ್ಟೆಯ ಸಾಮಾನ್ಯ ಸಾರಿಗೆ ಗ್ರಾಹಕರು ಮತ್ತು ಸಂಸ್ಥೆಯ ಬೊಕ್ಕಸ ತುಂಬುವವರು).
ಪ್ರಶ್ನೆ: ಸಾಮಾನ್ಯ ಸಾರಿಗೆ ಗ್ರಾಹಕರು ಸೆಟೆದು ನಿಲ್ಲುವ ಕಾಲ ಸನಿಹದಲ್ಲಿದೆಯಾ?
ವಸಂತ್ ಕುಮಾರ್ ಮೈಸೂರು ಮಠ, ಮೈಸೂರು ಗ್ರಾಹಕರ ಪರಿಷತ್